ಮಂಗಳವಾರ, ಡಿಸೆಂಬರ್ 11, 2012

ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ

ಕನ್ನಡಕ್ಕೆ ಡಬ್ಬಿಂಗ್ ಬಂದಲ್ಲಿ ಕನ್ನಡ ನುಡಿ ಹಾಗು ಕನ್ನಡಿಗರಿಗೆ ಉಪಯೋಗ ಆಗುವುದೇ ಹೊರತು ಯಾವ ಅಪಾಯವು ಇಲ್ಲ ಎಂದು ಬರೆದ ಅಂಕಣ "ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ" ದಿನಾಂಕ ೫ - ಡಿಸೆಂಬರ್ - ೨೦೧೨ ರಂದು ಪ್ರಜಾವಾಣಿ ಸುದ್ದಿ ಹಾಳೆಯಲ್ಲಿ ಪ್ರಕಟವಾಗಿತ್ತು. ಆ ಅಂಕಣವನ್ನು ಮತ್ತೊಮ್ಮೆ ಕೆಳಗೆ ನೀಡಿದ್ದೇನೆ ಓದಿಲ್ಲವಾದರೆ ಒಮ್ಮೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.

*****************************************************************

 "ಕಟ್ಟಿ ಹಾಕುವ ಸಂಸ್ಕೃತಿಯಿಂದ ನಷ್ಟ" 


ಕಳೆದ ಒಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತ ಬಂದಿರುವ ಡಬ್ಬಿಂಗ್ ಚರ್ಚೆ ಈಗ ಮತ್ತೆ ಕಾವೇರಿದೆ. ಕರ್ನಾಟಕ ಚಲನಚಿತ್ರ ಮಂಡಳಿಗೆ ಸಿನಿಮಾ ಮತ್ತು ಧಾರಾವಾಹಿಗಳ ಡಬ್ಬಿಂಗ್ ವಿರೋಧಿ ನೀತಿಯನ್ನು ಪ್ರಶ್ನಿಸಿ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯ (ಸಿಸಿಐ) ಜಾರಿ ಮಾಡಿರುವ ಕೋರ್ಟ್ ನೋಟೀಸ್ ಮತ್ತೊಮ್ಮೆ ಈ ಡಬ್ಬಿಂಗ್ ಚರ್ಚೆಯನ್ನು ಮುಂಪುಟಕ್ಕೆ ತಂದಿದೆ. ಕೇವಲ ಕನ್ನಡಿಗ ಗ್ರಾಹಕ ಮತ್ತು ಚಿತ್ರರಂಗದ ನಡುವೆ ಇದ್ದ ಈ ಚರ್ಚೆ ಈಗ ಕಾನೂನು ಸಮರಕ್ಕೆ ಅಣಿಯಾಗಿ ನಿಂತಿದೆ. ಈ ಹೊತ್ತಿನಲ್ಲಿ "ಕನ್ನಡಕ್ಕೆ ಡಬ್ಬಿಂಗ್ ಬೇಡ" ಅನ್ನುವವರ ವಾದದ ಕಡೆ ಗಮನಹರಿಸಿದರೆ ಯಾವುದೇ ಹುರುಳಿಲ್ಲದ ಹಾಗೂ  ಮುಂದೊಮ್ಮೆ ಕನ್ನಡಕ್ಕೆ ಮಾರಕ ಆಗುವಂತಹ ವಿಚಾರಗಳು ಹೊರಬೀಳುತ್ತವೆ. ಡಬ್ಬಿಂಗ್ ಬೇಡ ಅನ್ನುವುದಕ್ಕೆ ಡಬ್ಬಿಂಗ್ ವಿರೋಧಿ ಬಣ ಕೊಡುವ ಕಾರಣಗಳು; 
  • ಡಬ್ಬಿಂಗ್ ಕನ್ನಡ ವಿರೋಧಿ
  • ಕನ್ನಡ ಹಾಳಾಗುವುದು
  • ಕನ್ನಡ ಸಂಸ್ಕೃತಿ ಕೆಡುವುದು
  • ಕನ್ನಡ ಚಿತ್ರರಂಗದವರ ಕೆಲಸ ಹೋಗುವುದು
  • ಹಾಗೆಯೇ ಕನ್ನಡ ಚಿತ್ರರಂಗ ಚಿಕ್ಕದು ಅದು ಡಬ್ಬಿಂಗ್ ಅಲೆಯನ್ನು ತಡೆದುಕೊಳ್ಳುವ ಶಕ್ತಿ  ಹೊಂದಿಲ್ಲ ಎನ್ನುವುದು
ಮೇಲಿನ ಒಂದೊಂದು ಕಾರಣಗಳನ್ನು ಬಿಡಿಸುತ್ತ ಹೋಗೋಣ.
ಕನ್ನಡಿಗರು ಕನ್ನಡದಲ್ಲೇ ಎಲ್ಲ ಬಗೆಯ ಮನರಂಜನೆ ಸಿಗಬೇಕೆನ್ನುವುದು ಹೇಗೆ ಕನ್ನಡ ವಿರೋಧಿ ಆಗುತ್ತದೆ? "ಜಗತ್ತಿನ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮವನ್ನು ನಾವು  ನಮ್ಮದೇ ನುಡಿಯಲ್ಲಿ ನೋಡುವಂತಾಗಬೇಕು" ಎನ್ನುವುದು ಯಾವ ರೀತಿಯಿಂದಲೂ ಕನ್ನಡ ವಿರೋಧಿ ಎನಿಸಿಕೊಳ್ಳುವುದಿಲ್ಲ. ಅವತಾರ್ ನಂತಹ ಸಿನಿಮಾಗಳು, ಸತ್ಯ ಮೇವ ಜಯತೆಯಂತಹ ಕಾರ್ಯಕ್ರಮಗಳನ್ನು ಕನ್ನಡಿಗರು ಸವಿಯಲು ಬೇರೊಂದು ನುಡಿಯ ಮೊರೆ ಹೋಗಬೇಕಾಗಿರುವುದು ಕನ್ನಡಿಗರ ದೌರ್ಭಾಗ್ಯವೆಂದೇ ಹೇಳಬೇಕು. ಡಬ್ಬಿಂಗ್ ಇಲ್ಲವೆಂದ ಮಾತ್ರಕ್ಕೆ ಕನ್ನಡಿಗರು ಬೇರೆ ನುಡಿಯ ಚಿತ್ರಗಳನ್ನು ನೋಡದೆ ಬಿಡುತ್ತಿಲ್ಲ, ಕನ್ನಡೇತರ ಚಿತ್ರಗಳನ್ನು ನೋಡುವುದಕ್ಕಾಗಿ ಕನ್ನಡಿಗರು ಬೇರೆ ಭಾಷೆಯನ್ನು ನಿಧಾನವಾಗಿ ಕಲಿಯುತ್ತಿದ್ದಾರೆ, ಹೀಗೆ ದಿನೇ ದಿನೇ ಕನ್ನಡೇತರ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ, ಇದರಿಂದ ಪರಭಾಷೆ ಚಿತ್ರಗಳಿಗೆ ನಮ್ಮಲ್ಲಿ ಒಂದು ಒಳ್ಳೆ ಮಾರುಕಟ್ಟೆ ನಿರ್ಮಾಣ ಮಾಡಿಕೊಡಲಾಗಿದೆ! 
ಇಂದಿನ ಮಕ್ಕಳಿಗೆ ಕಾರ್ಟೂನ್ ಆಗಲಿ ಒಳ್ಳೆಯ ಅನಿಮೇಷನ್ ಚಿತ್ರಗಳಾಗಲಿ ಅವರ ನುಡಿಯಲ್ಲಿ ಸಿಗುತ್ತಿಲ್ಲ, ವಿಜ್ಞಾನ ಮತ್ತು ಕಲಿಕೆಗೆ ಸಂಬಂಧಪಟ್ಟ ಹಿಸ್ಟರಿ, ನ್ಯಾಷನಲ್ ಜಿಯಾಗ್ರಫಿ ಮತ್ತು ಡಿಸ್ಕವರಿಯಂತಹ ಚಾನೆಲ್ ಗಳು ಕೂಡ ಕನ್ನಡದಲ್ಲಿ ಇಲ್ಲ, ಹೀಗೆ ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಕನ್ನಡದ ಪಾತ್ರ ಏನೂ ಇಲ್ಲದೆ ಹೋದಲ್ಲಿ ಮುಂದಿನ ಪೀಳಿಗೆ ಕನ್ನಡವನ್ನು ನಿಜವಾಗಿಯೂ ಉಳಿಸಿಕೊಳ್ಳುವುದೇ? ಮಕ್ಕಳನ್ನು ಎಳೆಯ ವಯಸ್ಸಿನಿಂದಲೇ ಕನ್ನಡದಿಂದ ದೂರವಿಡುವುದು ಕನ್ನಡಕ್ಕೆ ಮಾರಕವೇ ಹೊರತು ಪೂರಕವಲ್ಲ. ಡಬ್ಬಿಂಗ್ ಇದ್ದಲ್ಲಿ ಕನ್ನಡ ಬೆಳೆಯುವುದೇ ಹೊರತು ಅಳಿಯುವುದಿಲ್ಲ ಎಂದು ಈ ಮೇಲಿನ ಉದಾಹರಣೆಗಳ ಮೂಲಕ ನಾವು ಅರಿತುಕೊಳ್ಳಬೇಕಿದೆ. ಡಬ್ಬಿಂಗ್ ಕನ್ನಡ ವಿರೋಧಿ ಎಂಬ ಅಪನಂಬಿಕೆ ಇಟ್ಟುಕೊಂಡು ನಿಧಾನವಾಗಿ ನಮ್ಮ ನುಡಿಯ ಅಂತ್ಯಕ್ಕೆ ನಾವೇ  ಮುನ್ನುಡಿ ಬರೆಯುತ್ತಿದ್ದೇವೆ.

ಇನ್ನು ಕನ್ನಡ ಸಂಸ್ಕೃತಿಯ ವಿಚಾರಕ್ಕೆ ಬಂದರೆ ಕನ್ನಡ ಸಿನಿಮಾ ಎಂಬುದು ಕನ್ನಡ ಸಂಸ್ಕೃತಿಯ ಕನ್ನಡಿ ಅಲ್ಲವೇ ಅಲ್ಲ. ಹಾಗೇನಾದರು ಆಗಿದ್ದರೆ  ಮಚ್ಚು ಹಿಡಿದು ಸಿಕ್ಕವರನ್ನು ಕೊಚ್ಚುವುದು, ಹೊಕ್ಕಳು ತೋರಿಸಿ ಹಣ್ಣೆಸೆಯುವುದು ಇವೆಲ್ಲ ನಮ್ಮ ಸಂಸ್ಕೃತಿ ಆಗಬೇಕಿತ್ತು. ಚಿತ್ರಗಳು ಸಂಸ್ಕೃತಿಯನ್ನು ಸಾರುತ್ತವೆ ಎನ್ನುವುದಾದರೆ ಚಿತ್ರರಂಗದವರು ಯಾವ ಸಂಸ್ಕೃತಿ ಬಿಂಬಿಸಲು ನೀಲಿ ಚಿತ್ರದ ನಾಯಕಿಯನ್ನು ಐಟಂ ಹಾಡಿಗೆ ಕುಣಿಸುವ ಪ್ರಯತ್ನ ಪಟ್ಟಿದ್ದರು ಎಂದು ತಿಳಿಯದು. ಡಬ್ಬಿಂಗ್ ಬಂದಾಕ್ಷಣ ನಾವು ನಾಡಹಬ್ಬ ದಸರಾ ನಿಲ್ಲಿಸುತ್ತೆವಾ? ಅಥವಾ ಸವದತ್ತಿ ಎಲ್ಲಮ್ಮನ ಜಾತ್ರೆ ಮಾಡೋದು ನಿಲ್ಲಿಸುತ್ತೆವಾ? ಅಥವಾ ಕನ್ನಡಿಗರು ತಮ್ಮತನವನ್ನೇ ಮರೆತು ಬಿಡುತ್ತಾರೆಯೇ? ಈ ಡಬ್ಬಿಂಗ್ ಮತ್ತು ಕನ್ನಡ ಸಂಸ್ಕೃತಿಗೂ ಎತ್ತಣದಿಂದ ಎತ್ತ ಸಂಬಂಧವೋ ತಿಳಿಯದು. ಡಬ್ಬಿಂಗ್ ಚಿತ್ರಗಳು ಕನ್ನಡ ಸಂಸ್ಕೃತಿಯನ್ನೇ ಕೊಲ್ಲುತ್ತೆ ಅನ್ನುವುದಾದರೆ ಡಬ್ಬಿಂಗ್ ಇರುವ ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳಿ ಸಂಸ್ಕೃತಿಗಳೆಲ್ಲ ಇಷ್ಟೊತ್ತಿಗೆ ನಶಿಸಿ ಹೋಗಬೇಕಿತ್ತಲ್ಲವೇ? ಅಥವಾ ಕನ್ನಡ ಚಿತ್ರಗಳಿಂದಲೇ ಕನ್ನಡ ಸಂಸ್ಕೃತಿ ಉಳಿದಿದೆ ಅನ್ನುವುದಾದರೆ ಕನ್ನಡದಲ್ಲಿ ಬಂದ ಸಾಲು ಸಾಲು ಮಚ್ಚು-ಕೊಚ್ಚು ಚಿತ್ರಗಳಿಂದಾಗಿ ಕನ್ನಡ ಸಮಾಜದಲ್ಲಿ ಮನೆ ಮನೆಯಲ್ಲೂ ಮಚ್ಚಿನ ಕಾರುಬಾರು ನಡೆಯಬೇಕಿತ್ತೆನೋ ಅಥವಾ ಮಚ್ಚು ಕೊಚ್ಚು ಅನ್ನುವುದೇ ಕನ್ನಡ ಸಂಸ್ಕೃತಿಯಾಗಬೇಕಿತ್ತು. ಆದರೆ ಅಂತಹದ್ದು ಏನೂ ಆಗದಿರುವುದು ಡಬ್ಬಿಂಗ್ ಕನ್ನಡ ಸಂಸ್ಕೃತಿಗೆ ಮಾರಕ ಎಂಬುದು ಒಂದು ಅಪನಂಬಿಕೆ ಎಂದು ತಿಳಿಸುತ್ತದೆ.
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವರ ವಿಚಾರಕ್ಕೆ ಬಂದರೆ, ಡಬ್ಬಿಂಗ್ ಬಂದಲ್ಲಿ ಚಿತ್ರರಂಗದ ಕೆಲಸಗಾರರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ವಾದ ಕೂಡ ಇದೆ. ಡಬ್ಬಿಂಗ್ ಬಂದೊಡನೆ ಪುನಿತ್ ರಾಜ್ ಕುಮಾರ್ ಚಿತ್ರ ಮಾಡೋದು, ಯೋಗರಾಜ್ ಭಟ್ರು ಸಾಹಿತ್ಯ ಬರೆಯೋದು, ಹರಿಕೃಷ್ಣ ಸಂಗೀತ ನೀಡೋದು ಇವರೆಲ್ಲ ತಮ್ಮ ಕೆಲಸ ನಿಲ್ಲಿಸಿ ಬಿಡುವುದಿಲ್ಲ, ಕನ್ನಡ ಚಿತ್ರಗಳು ಹಾಗು ಧಾರಾವಾಹಿಗಳು ಬರುವುದೂ ನಿಲ್ಲುವುದಿಲ್ಲ. ಇಷ್ಟಕ್ಕೂ ಈಗ ಬರುವ ಒಂದು ಕನ್ನಡ ಚಿತ್ರದಲ್ಲಿ ನಾಯಕಿ ಹಾಗು ಹಾಡುಗಾರರು ಮುಂಬೈನಿಂದಲೋ, ಕೇರಳದಿಂದಲೋ ಬಂದರೆ ಉಳಿದ ತಂತ್ರಜ್ನರ ಅರ್ಧದಷ್ಟು ದಂಡು ಪರಭಾಷಿಕರದ್ದೆ ಆಗಿರುತ್ತದೆ, ಹತ್ತಿರದ ಕಲಾವಿದರಿಗೆ ಅವಕಾಶ ನೀಡದೆ ಪಾಕಿಸ್ತಾನದಿಂದಲೂ ನಾಯಕಿಯರನ್ನು ಕರೆಸುವ ನಮ್ಮ ಚಿತ್ರರಂಗದವರು ಡಬ್ಬಿಂಗ್ ನಿಂದ ಕನ್ನಡ ಕೆಲಸಗಾರರ ಅನ್ನ ಹೋಗುವುದು ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂಬುದನ್ನು ತೋರಿಸುತ್ತದೆ. ಡಬ್ಬಿಂಗ್ ಬಂದರೆ ಕನ್ನಡಿಗರ ಕೆಲಸಕ್ಕೆ ಕುತ್ತಾಗುತ್ತದೆ ಎಂದು ಹೇಳುವ ಕನ್ನಡ ಚಿತ್ರರಂಗದವರು ಕನ್ನಡ ಚಿತ್ರಗಳಲ್ಲಿ ಕನ್ನಡದವರಿಗೆ ಅವಕಾಶ ನೀಡಿ ಕನ್ನಡಿಗರ ಪರ ಕಾಳಜಿ ತೋರಬೇಕಿದೆ.

ಡಬ್ಬಿಂಗ್ ಬಂದಲ್ಲಿ ಮನರಂಜನೆ ಕ್ಷೇತ್ರದಲ್ಲಿ ಹೊಸ ಹೊಸ ಕೆಲಸ ಹುಟ್ಟುವ ಸಾಧ್ಯತೆಗಳು ಇದೆ. ಉದಾಹರಣೆಗೆ, ೧೯೯೦ ರ ದಶಕದಲ್ಲಿ ಹಲವೆಡೆ ಎಸ್.ಟಿ.ಡಿ ಬೂತನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದವರು ಹಲವರಿದ್ದರು. ಅದೇ ಸಮಯದಲ್ಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಿತು. ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ ಎಸ್.ಟಿ.ಡಿ ಬೂತಿನ ಉದ್ದಿಮೆ ಕುಸಿಯತೊಡಗಿತು. ಆ ಸಂಧರ್ಭದಲ್ಲಿ ಎಸ್.ಟಿ.ಡಿ ಬೂತಿನವರ ಉದ್ದಿಮೆ ಕಾಪಾಡಲು ಸರ್ಕಾರವೇನಾದರು ಮೊಬೈಲ್ ಫೋನ್ ನಿಷೇಧಿಸಿದ್ದರೆ ಇಂದು ಕಾಣುತ್ತಿರುವ ಮೊಬೈಲ್ ಫೋನ್ ಕ್ರಾಂತಿ ಆಗುತ್ತಲೇ ಇರಲಿಲ್ಲ. ಎಸ್.ಟಿ.ಡಿ ಬೂತನ್ನು ಇಟ್ಟಿದ್ದ ವ್ಯಾಪಾರಿಗಳು ಇಂದು ಮೊಬೈಲ್ ಅಂಗಡಿ ಇಟ್ಟುಕೊಂಡು, ಮೊಬೈಲ್ ಕರೆನ್ಸಿ ಮಾರಿಕೊಂಡು, ಮೊಬೈಲ್ ಸಂಭಂಧಿತ ಇತರೆ ಸಾಮಗ್ರಿ ಮಾರಿಕೊಂಡು ತಮ್ಮ ವ್ಯಾಪಾರ ವೃದ್ಧಿ ಮಾಡಿಕೊಂಡಿದ್ದಾರೆ. ಮೊಬೈಲ್ನಿಂದ  ಜನರಿಗೆ ಅನುಕೂಲ ಒಂದೇ ಅಲ್ಲ ಮೊಬೈಲ್ ಸಂಬಂಧಿತ ಹಲವು ಸಣ್ಣ ಪುಟ್ಟ ಉದ್ದಿಮೆಗಳ ಹುಟ್ಟೂ ಆಗಿದೆ. ಹಾಗೆಯೇ ಡಬ್ಬಿಂಗ್ ಬಂದಲ್ಲಿ  ಹೊಸ ರೀತಿಯ ಕೆಲಸದ ಅವಕಾಶಗಳು ಹುಟ್ಟುತ್ತವೆ, ಬೇರೆ ಭಾಷೆಯ ಒಂದು ಚಿತ್ರ ಅಥವಾ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಲು ಕನ್ನಡಿಗರು ಬೇಕೆ ಬೇಕು. ಉದಾಹರಣೆಗೆ, ನ್ಯಾಷನಲ್ ಜಿಯಾಗ್ರಫಿಯ ಒಂದು ಕಾರ್ಯಕ್ರಮವನ್ನು ಕನ್ನಡಕ್ಕೆ ತರಲು ಕನ್ನಡಿಗ ತಂತ್ರಜ್ನರ ಅವಶ್ಯಕತೆ ಬೀಳುವುದು. ಇದರಿಂದ ಕನ್ನಡದಲ್ಲಿ ವಿಜ್ಞಾನ ಕಲಿತವರಿಗೆ ಅವಕಾಶ ಸಿಗುವುದು. ಹೀಗೆ ಡಬ್ಬಿಂಗ್ ಎಂಬುದು ಕನ್ನಡಿಗರಿಗೆ ಉದ್ಯೋಗ ಅವಕಾಶದ ಬಾಗಿಲು ತೆರೆಯುವುದು ಮತ್ತು ಒಟ್ಟಾರೆಯಾಗಿ ಉದ್ಯೋಗ ಅವಕಾಶಗಳ ಸಂಖ್ಯೆ ಹೆಚ್ಚುವುದೇ ಹೊರತು ತೊಂದರೆ ಆಗುವ ಯಾವ ಮುನ್ಸೂಚನೆಗಳು ಕಾಣುತ್ತಿಲ್ಲ.

ನಮ್ಮ ಚಿತ್ರರಂಗ ಚಿಕ್ಕದು ಎಂದು ಕೊರಗುವ ಬದಲು ಡಬ್ಬಿಂಗ್ ಚಿತ್ರಗಳ ಜೊತೆ ಪೈಪೋಟಿಗೆ ಬಿದ್ದು ಇನ್ನೂ ಉತ್ತಮ ಚಿತ್ರಗಳನ್ನು ನೀಡುವತ್ತ ಚಿತ್ರರಂಗದವರು ಗಮನ ಹರಿಸಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಅನುವಾದ ಕೃತಿಗಳ ನಿಷೇಧವಿಲ್ಲ ಹಾಗೆಂದು ನಮ್ಮ ಸಾಹಿತ್ಯವೇನು ಬಡವಾಗಿಲ್ಲ, ಅನುವಾದಿತ ಮತ್ತು ಸ್ವಂತ ಕೃತಿಗಳಿಂದ ನಮ್ಮ ಸಾಹಿತ್ಯ ಶ್ರೀಮಂತವಾಗಿದೆ. ಅಷ್ಟೇ ಏಕೆ ದೇಶದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆ ನಮ್ಮ ಕನ್ನಡಕ್ಕಿಲ್ಲವೇ? ಇಂದು ಕನ್ನಡಿಗರು ಉನ್ನತ ಕಲಿಕೆಗಾಗಿ ಇಂಗ್ಲೀಶ್ ನೆಚ್ಚಿ ಕೊಳ್ಳಬೇಕಾಗಿದೆ, ಹೀಗಿರುವಾಗ ಮನರಂಜನೆಗೊಸ್ಕರ ಬೇರೆ ಬೇರೆ ಭಾಷೆಗಳ ಹಿಂದೆ ಹೋಗಬೇಕಾಗಿರುವುದು ಕನ್ನಡವೆಂಬುದನ್ನು ಕೇವಲ ಅಡುಗೆಮನೆಯ ಭಾಷೆಯಾಗಿ ಮಾಡಿ ಬಿಡುತ್ತದೆ. ಕನ್ನಡಕ್ಕೆ ಡಬ್ಬಿಂಗ್ ಬಂದು ಕನ್ನಡಿಗರಿಗೆ ಎಲ್ಲ ಬಗೆಯ ಮನರಂಜನೆ ಕನ್ನಡದಲ್ಲಿ ಸಿಗುವಂತೆ ಮಾಡುವುದು ಕನ್ನಡಕ್ಕೆ ಹೊಸದೊಂದು ಶಕ್ತಿ ತುಂಬಿಸಿದಂತೆ.  ಕಟ್ಟಿ ಹಾಕುವ ಸಂಸ್ಕೃತಿಯಿಂದ ಯಾವ ಮಾರುಕಟ್ಟೆಯು ಬೆಳೆಯದು, ಡಬ್ಬಿಂಗ್ ಬಂದು ಹೊಸ ಅವಕಾಶಗಳಿಗೆ ನಾಂದಿ ಹಾಡುವುದರ ಜೊತೆಗೆ ಕನ್ನಡಿಗರಿಗೆ ಕನ್ನಡದಲ್ಲೇ ಎಲ್ಲ ಬಗೆಯ ಮನರಂಜನೆ ದೊರೆತು ಕನ್ನಡವು ಯಾವಾಗಲು ಅವರ ಕಿವಿಮೇಲೆ ಬೀಳುತ್ತಿರಲಿ ಮತ್ತು ಕಣ್ಣಿಗೆ ಕಾಣುತ್ತಿರಲಿ ಆ ಮೂಲಕ ಕನ್ನಡ ಬೆಳೆಯಲಿ.

ಬುಧವಾರ, ನವೆಂಬರ್ 21, 2012

m - governance - ಒಂದು ಕಿರು ನೋಟ



ನಾವು ಕಾಣದ, ಕೇವಲ ಕೇಳಿದ ಅಥವಾ ಇತಿಹಾಸದ ಪುಟಗಳಲ್ಲಿ ಓದಿದ ಪ್ರಕಾರ ರಾಜ ಮನೆತನದ ಆಳ್ವಿಕೆಯ ಕಾಲದಲ್ಲಿ ರಾಜರ ಕಾನೂನು, ರಾಜಾಜ್ಞೆ ಹಾಗು ಇನ್ನಿತರ ಆಡಳಿತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಡಂಗುರ ಸಾರುವುದರ  ಮೂಲಕ ತಿಳಿಸಲಾಗುತ್ತಿತ್ತು, ನಂತರ ಬಂದ  ಮಂದಿಯಾಳ್ವಿಕೆ (ಪ್ರಜಾಪ್ರಭುತ್ವ) ಯಲ್ಲಿ, ಸರ್ಕಾರವು ತನ್ನ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸುದ್ದಿ ಮಾಧ್ಯಮವನ್ನು ಬಳಸಿತು. ಕಂಪ್ಯೂಟರ್ ಕ್ರಾಂತಿಯಿಂದ ಸರ್ಕಾರ ಮತ್ತು ಜನರ ನಡುವಿನ ಅಂತರ ಮತ್ತಷ್ಟು ಕಡಿಮೆ ಆಯಿತು. ಸರ್ಕಾರವು ತನ್ನ ಮಾಹಿತಿಗಳ ಜೊತೆ ಕೆಲವು ಸೇವೆಗಳನ್ನು ಕೂಡ ಈ ಅಂತರ್ಜಾಲದ ಸಹಾಯದಿಂದ ಜನರಿಗೆ ನೀಡಲು ಸಾಧ್ಯವಾಯಿತು. ಎತ್ತುಗೆಗೆ, ನಮ್ಮ ಚುನಾವಣೆ  ಗುರುತಿನ ಚೀಟಿಯ ವಿವರವನ್ನು ಸರ್ಕಾರಿ ಮಿಂದಾಣದಲ್ಲಿ ಪಡೆಯಬಹುದು. ಹೀಗೆ e - governance ಎಂಬ ಪರಿಣಾಮಕಾರಿ ಸೇವೆಯ ಹುಟ್ಟಿನಿಂದ ಸರ್ಕಾರ ಹಾಗು ಜನರಿಗೆ ಮಾಹಿತಿ ಹಂಚಿಕೊಳ್ಳಲು ನೆರವಾಗಿದೆ.
ನಮ್ಮ ದೇಶದಲ್ಲಿ ಅಂತರ್ಜಾಲ ಹಾಗು ಕಂಪ್ಯೂಟರ್ ತಿಳುವಳಿಕೆ ಉಳ್ಳವರ ಹಾಗು ಇವುಗಳ ಸೌಕರ್ಯ ಹೊಂದಿರುವವರ ಎಣಿಕೆ ತೀರ ಕಡಿಮೆ ಇರುವುದು  e - governance  ಅನ್ನು ಪೂರ್ಣವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಆದರೆ, ದೇಶದಲ್ಲಿ ದೊಡ್ಡದಾಗಿ ಬೆಳೆಯುತ್ತಿರುವ ಅಲೆಯುಲಿ (ಮೊಬೈಲ್ ಫೋನ್) ಬಳಕೆದಾರರ ಎಣಿಕೆ  m - governance ಸೇವೆ ನೀಡಲು ಆಶಾದಾಯಕವಾಗಿದೆ!

ಏನಿದು m - governance?
m - governance ಎಂಬುದು e - governance ನ ಒಂದು ಭಾಗ, ಇದರಲ್ಲಿ  ಸರ್ಕಾರವು ತನ್ನ ಸೇವೆ ಹಾಗು ಮಾಹಿತಿಯನ್ನು ಅಲೆಯುಲಿಗಳ (ಮೊಬೈಲ್ ಫೋನ್) ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಬಹುದು. ಎತ್ತುಗೆಗೆ ಒಂದು ಚುಟುಕು ಓಲೆ (SMS ) ಕಳಿಸುವುದರ ಮೂಲಕ ಹೇಗೆ ಒಬ್ಬ ವಿದ್ಯಾರ್ಥಿಯ SSLC ಅಂಕಗಳನ್ನು ತಿಳಿಯುವರೋ ಹಾಗೆ. ದೇಶದಲ್ಲಿ ಅಲೆಯುಲಿ ಬಳಕೆದಾರರ ಎಣಿಕೆ ಈಗಾಗಲೇ ಅತಿ ಹೆಚ್ಚು ಇರುವುದರಿಂದ ಹಾಗು ವೇಗವಾಗಿ ಇದು ಬೆಳೆಯುತ್ತಿರುವುದರಿಂದ m - governance ಸೇವೆ ಗೆಲುವು ಪಡೆಯುದು ಎಂಬ ನಿರೀಕ್ಷೆ ಇದೆ.

m - governance ನಿಂದ ಏನೆಲ್ಲಾ ಸೇವೆ ನೀಡಬಹುದು?
  • ಸರ್ಕಾರಕ್ಕೆ ಸಂಬಂಧ ಪಟ್ಟ, ಮಾಹಿತಿ ಹಕ್ಕಿನ ಗಡಿಯೊಳಗೆ ಬರುವ ಮಾಹಿತಿಗಳನ್ನು ಜನರ ಅಂಗೈಗೆ ತಲುಪುವಂತೆ ಮಾಡಬಹುದು.
  • ಜನ ಸಾಮಾನ್ಯರು ಕುಂದು ಕೊರತೆಗಳನ್ನು, ಹೊಸ ಯೋಜನೆಗಳ ಅವಶ್ಯಕತೆಯನ್ನು, ಪ್ರತಿಕ್ರಿಯೆಗಳನ್ನು ಹಾಗು ದೂರೂಗಳನ್ನು ಅಲೆಯುಲಿ ಮೂಲಕವೇ ಸರ್ಕಾರಕ್ಕೆ ತಿಳಿಸುವಂತೆ ಆಗಬಹುದು.
  • ಸರ್ಕಾರವು ಕೆಲವು ಯೋಜನೆಗಳಿಗೆ ಜನರ ಅಭಿಪ್ರಾಯವನ್ನು ಮತಗಳ ಮೂಲಕ ಪಡೆಯಬಹುದು (m - voting )
  • ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ಇಲ್ಲವೇ ಇನ್ನಿತರ ಬಾಕಿ ವಿವರಗಳನ್ನು ಪಡೆಯಬಹುದು.
  • ಹೆಚ್ಹು ಮಳೆ ಬಂದು ನೆರೆ ಬಂದಾಗ, ಭೂಕಂಪನ ಅಥವಾ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಜನರನ್ನು ತಲುಪಿ ಜಾಗ್ರತೆಯ ಮಾಹಿತಿ ನೀಡಬಹುದು ಹಾಗೆ ಜನರಿಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತಲುಪಲು ಸಹಾಯಕಾರಿ.
  • ...... ಹೀಗೆ ಹತ್ತು ಹಲವು.
ಈ ಎಲ್ಲ ಯೋಜನೆಗಳನ್ನು ಹೊಸ ಹೊಸ ಸೇವೆಗಳನ್ನು ಕೇಳಲು ಬಹಳ ನಲಿವಾಗುತ್ತೆ ಆದರೆ ಇದು ಅತಿ ಮೂಲಭೂತವಾದ 'ನುಡಿ-ಮಾಧ್ಯಮ'ವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಈ ಸೇವೆಗಳ ಸೋಲು ಖಂಡಿತ ಅನ್ನಿಸುತ್ತದೆ. ಯಾವುದೇ ಸರ್ಕಾರಕ್ಕೆ ತನ್ನ ಜನರನ್ನು ತಲುಪಲು ಆ ಜನರ ನುಡಿಯೇ ಸಾಧನ. ಒಮ್ಮೆ ಯೋಚಿಸಿ ನೋಡಿ, ಮೇಲೆ ತಿಳಿಸಿದ ಎಲ್ಲ ಸೇವೆಗಳು ಕರ್ನಾಟಕದಲ್ಲಿ ಜಾರಿಗೆ ಬಂದರೆ ಮತ್ತು ಆ ಸೇವೆಗಳು ಕೇವಲ ಇಂಗ್ಲಿಷ್ ಮೂಲಕ ಸಿಗುವಂತಿದ್ದರೆ 7 ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಉಪಯೋಗ ಆಗಬಹುದು? ನೆರೆ ಬಂದಾಗ, ಸರ್ಕಾರ ಸುರಕ್ಷ್ಸತೆಯ ಕುರಿತು ಮಾಹಿತಿಗಳನ್ನು ಇಂಗ್ಲೀಷಿನಲ್ಲಿ ನೀಡುತ್ತಿದ್ದರೆ ಇಂಗ್ಲಿಷ್ ಬಾರದವರೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ! 

ಪಕ್ಕದ ಕೇರಳ ಸರ್ಕಾರ m - governance ಪದ್ದತಿಯನ್ನು ಅಳವಡಿಸಿಕೊಂಡು ಸೇವೆ ನೀಡುತ್ತಿದೆ, ಒಂದು ಚುಟುಕೋಲೆ (SMS) ಕಳಿಸುವುದರ ಮೂಲಕ ಜನರು]ತಮ್ಮ]ಚುನಾವಣೆ  ಗುರುತಿನ ಚೀಟಿ ವಿವರ ತಿಳಿಯಬಹುದು ಮತ್ತು ಇತ್ತೀಚಿಗೆ ಇದೇ ಸರ್ಕಾರದ ಆರೋಗ್ಯ ಇಲಾಖೆ, ನಿಷೇಧಿತ ಔಷಧಿಗಳ ವಿವರವನ್ನು ತಿಳಿಯ ಬಯಸುವವರಿಗೆ, ವಿವರಗಳನ್ನು ಚುಟುಕೋಲೆ ಮೂಲಕ ತಿಳಿಸುವ ವ್ಯವಸ್ಥೆ ಮಾಡಿದೆ.  ನೆರೆ, ನಿಷೇಧಿತ ಔಷಧಿ, ಭೂಕಂಪನ ಹೀಗೆ ಪ್ರಾಣ ಹಾನಿ ತರುವಂತಹ ವಿವರಗಳು ಜನರಿಗೆ ತಿಳಿಯುವ ನುಡಿಯಲ್ಲಿ ಸಿಗದಿದ್ದರೆ ಏನು ಪ್ರಯೋಜನ?   

ಚಿತ್ರ ಕೃಪೆ -ಗೂಗಲ್ ಇಮೇಜ್ 

ಕರ್ನಾಟಕ ಸರ್ಕಾರ m - governance ಸೇವೆಯನ್ನು ಜನರಿಗೆ ತಿಳಿಯುವ ಕನ್ನಡದಲ್ಲಿ ನೀಡುವುದು ಎಷ್ಟು ಮುಖ್ಯವೋ, ಜನರ ಅಲೆಯುಲಿಗಳಲ್ಲಿ ಕನ್ನಡ ಆಯ್ಕೆ ಇರುವುದು ಅಷ್ಟೇ ಮುಖ್ಯ, ಈಗ ಮಾರುಕಟ್ಟೆಯಲ್ಲಿ ಇರುವ ಅಲೆಯುಲಿಗಳಲ್ಲಿ ಹೆಚ್ಚಿನವುಗಳಲ್ಲಿ ಕನ್ನಡವನ್ನು ಓದಲು-ಬರೆಯಲು ಆಗದು. ಕನ್ನಡ ಆಯ್ಕೆ ಇರುವ ಅಲೆಯುಲಿಯನ್ನು ಸರ್ಕಾರವು ನಾಡಿನ ಎಲ್ಲರಿಗು ನೀಡಲು ಸಾಧ್ಯವಿಲ್ಲ, ಇಲ್ಲವೇ ನಾಡಿನಲ್ಲಿ ಎಲ್ಲರಿಗು ಇಂಗ್ಲಿಷ್ ಕಲಿಸುವ ಯೋಜನೆ ಏನಾದರು ಸರ್ಕಾರ ಹಾಕಿಕೊಂಡಲ್ಲಿ ಅದು ನಗೆಪಾಟಲಿಗೆ ಈಡಾಗುತ್ತದೆ. ಅಲ್ಲದೆ, ಎಲ್ಲಾ ಜನರ ಹಣಕಾಸಿನ ಪರಿಸ್ಥಿತಿ ಮತ್ತು ಬಯಕೆಗಳು  ಒಂದೇ ರೀತಿಯಲ್ಲಿ ಇರುವುದಿಲ್ಲ, ಒಬ್ಬ ಒಂದು ಸಾವಿರ ರುಪಾಯಿಯ ಅಲೆಯುಲಿ ಕೊಂಡರೆ ಇನ್ನೊಬ್ಬ ಮೂವತ್ತು ಸಾವಿರದ ಅಲೆಯುಲಿ ಹೊಂದಿರುತ್ತಾನೆ, ಆದ್ದರಿಂದ ಕನ್ನಡ ಆಯ್ಕೆ ಇರುವ ಅಲೆಯುಲಿಯನ್ನೇ ಕೊಳ್ಳಬೇಕು ಎಂದು ನಿರ್ಭಂಧ ಹಾಕಲು ಆಗುವುದಿಲ್ಲ.  ನಾಡಿನಲ್ಲಿ ಮಾರಾಟವಾಗುವ ಎಲ್ಲಾ ಅಲೆಯುಲಿಗಳಲ್ಲಿ ಕನ್ನಡ ಆಯ್ಕೆ ಇದ್ದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ. ಇಂತಹ ಬೇಡಿಕೆಯೊಂದನ್ನು ತಯಾರಕ ಕಂಪನಿಗಳ ಮುಂದಿಡುವ ಕೆಲಸ ಕನ್ನಡ ಗ್ರಾಹಕರು ಮಾಡಬೇಕಿದೆ. ನಾವು ಕೊಳ್ಳುವ ಅಲೆಯುಲಿಯಲ್ಲಿ ಕನ್ನಡ ಆಯ್ಕೆ ಇದೆಯೇ ನೋಡಿಕೊಂಡು ಇಲ್ಲದಿದ್ದಲ್ಲಿ ಕನ್ನಡ ಆಯ್ಕೆಗೆ ಒತ್ತಾಯ ಮಾಡಿದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡವನ್ನು ಎಲ್ಲಾ ಅಲೆಯುಲಿಗಳಲ್ಲಿ ಕಾಣಬಹುದು ಮತ್ತು ಅದರ ಪ್ರಯೋಜನ ಪಡೆದುಕೊಳ್ಳಬಹುದು.

m - governance ಎನ್ನುವ ವಿಶಿಷ್ಟ ಸೇವೆಯಿಂದ ಜನರ ಅಂಗೈ ಮೇಲೆ ಸರ್ಕಾರದ ಮಾಹಿತಿ ಮತ್ತು ಸೇವೆಗಳು ಸಿಗುವಹಾಗಿದೆ, ಈ ಸೇವೆ ಕರ್ನಾಟಕದಲ್ಲಿ, ಕನ್ನಡದಲ್ಲೇ ಕನ್ನಡಿಗರಿಗೆ ಸಿಕ್ಕಿದರೆ ಒಂದು ಅರ್ಥ ಬರುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರದ ಪಾತ್ರದ ಜೊತೆಗೆ ಕನ್ನಡಿಗ ಗ್ರಾಹಕನಾಗಿ ನಮ್ಮ ಪಾತ್ರವು ಇದೆ. ಮುಂದೆ, ಯಾವುದೇ ಹೊಸ ಅಲೆಯುಲಿ ಕೊಳ್ಳುವಾಗ ಕನ್ನಡ ಆಯ್ಕೆ ಇದೆಯೇ ನೋಡಿ, ಇಲ್ಲದಿದ್ದಲ್ಲೇ ಆ ಕಂಪನಿಗೊಂದು ಪತ್ರ ಬರೆದು ಕನ್ನಡ ಆಯ್ಕೆಗಳನ್ನು ನೀಡುವಂತೆ ತಿಳಿಸಿ. ಹಾಗೆಯೇ ಸರ್ಕಾರಿ ಸೇವೆಗಳು m - governance ಮೂಲಕ ಕನ್ನಡದಲ್ಲಿ ಸಿಗದಿದ್ದಲ್ಲಿ ಕನ್ನಡದಲ್ಲಿ ನೀಡುವಂತೆ ಒತ್ತಾಯವಿರಲಿ. 

ಬುಧವಾರ, ಅಕ್ಟೋಬರ್ 31, 2012

ಗ್ರಾಹಕ ಚಳುವಳಿ ಮತ್ತು ಕನ್ನಡ


"Keep it away from children", "Not for Injection", "For external use only"...... ಇದನ್ನೆಲ್ಲಾ ಎಲ್ಲಾದರು ಒಂದು ಕಡೆ ಓದಿದ ಇಲ್ಲವೇ ನೋಡಿದ ನೆನಪಿದೆಯೇ ? ಹೌದು, ನೀವು ಕೊಂಡುಕೊಂಡ ಔಷಧಿಯಲ್ಲಿ ಯಾವುದೋ ಒಂದು ಮೂಲೆಯಲ್ಲಿ ಈ ಎಚ್ಹರಿಕೆ ಇರುತ್ತೆ ನೋಡಿ, ನಾವೇನೋ ಅದನ್ನ ನೋಡಿ ಅಲ್ಲೇ ಮರೆತು ಹೋಗಿರ್ತಿವಿ ಆದರೆ ಅದರ ಕುರಿತು ಸ್ವಲ್ಪ ಯೋಚಿಸಿದರೆ ಕೆಲವು ಆಘಾತಕಾರಿ ಸಂಗತಿಗಳು ತಿಳಿಯುತ್ತವೆ. ಈ ಮುಂಚೆ ತಿಳಿಸಿದ ಎಚ್ಚರಿಕೆಗಳು ನಮ್ಮ ನಾಡಿನ ಎಷ್ಟು ಜನರಿಗೆ ತಲುಪುತ್ತದೆ? ಹೀಗೆಯೇ, ಗ್ರಾಹಕನಾಗಿ ನಾವು ಕೊಳ್ಳುವ ಯಾವುದೇ ವಸ್ತುಗಳ ಮೇಲಿನ ಮಾಹಿತಿ ನಮಗೆ ಎಷ್ಟರ ಮಟ್ಟಿಗೆ ಸಿಗುತ್ತಿದೆ? ಹೊಸದೊಂದು ಪ್ರೆಶರ್ ಕುಕ್ಕರ್ ಅನ್ನೋ ಅಥವಾ ಗ್ಯಾಸ್ ಸಿಲಿಂಡರನ್ನು ಮನೆಗೆ ತಂದವರು  ಅದರ ಬಳಕೆ ಹಾಗು ಎಚ್ಚರಿಕೆ ಮಾಹಿತಿಯುಳ್ಳ ಇಂಗ್ಲಿಷ್ user guide ಓದಲಾಗದೆ, ಮೂಲೆಗೆ ಎಸೆದು, ಕೊನೆಗೆ ಬಳಸುವಾಗ ತಪ್ಪುಗಳಾಗಿ ಆದ ಪ್ರಾಣ ಹಾನಿಗಳು, ಅನಾಹುತಗಳು ಎಷ್ಟೋ? ಹಾಗೆಯೇ ಮುಂದೆ ಆಗಲಿರುವ ಅನಾಹುತಗಳೆಷ್ಟೋ? ಕ್ಷಮಿಸಿ, ಬಳಕೆ ಹಾಗು ಎಚ್ಚರಿಕೆ ಮಾಹಿತಿ ಸರಿಯಾಗಿ ಇಲ್ಲದ ಅಪಾಯಕಾರಿ ಅಡುಗೆ ಮನೆಯಲ್ಲಿ ನಿಮ್ಮ ಅಮ್ಮ, ಹೆಂಡತಿ, ಅಕ್ಕ, ತಂಗಿ, ಮಕ್ಕಳು ಅಥವಾ ನೀವು ಇರುವಿರಿ.

ಈ ಮೇಲಿನ ಟಿಪ್ಪಣಿ ಬರೆಯಬೇಕೆನಿಸಿದ್ದು ಗ್ರಾಹಕ ಚಳುವಳಿ ಕುರಿತು ಹೀಗೆಯೇ ಒಂದು ಅಂಕಣ ಓದಿದ ಮೇಲೆ. ಅಂಕಣದಲ್ಲಿ ತಿಳಿದ ಗ್ರಾಹಕನ ಹಕ್ಕುಗಳಾದ 
ಸುರಕ್ಷೆತೆಯ ಹಕ್ಕು
ಮಾಹಿತಿಯ ಹಕ್ಕು
ಆಯ್ಕೆ ಮಾಡುವ ಹಕ್ಕು
ದೂರುಗಳನ್ನು  ಹೇಳಿಕೊಳ್ಳುವ ಹಕ್ಕು

ಇವುಗಳಲ್ಲಿ ನನಗೆ 'ಮಾಹಿತಿಯ ಹಕ್ಕು' ತಲೆಗೊಂದು ಹುಳ ಬಿಟ್ಟಿದೆ. ಗ್ರಾಹಕ ಚಳುವಳಿಯ ಇತಿಹಾಸ ನೋಡಿದರೆ 1872 ರಲ್ಲಿ ಮೊದಲ ಬಾರಿಗೆ ಗ್ರಾಹಕರ ಹಕ್ಕಿನ ಕುರಿತ ಕೂಗು ದೂರದ ಅಮೇರಿಕಾದಲ್ಲಿ ಎದ್ದಿತು, ನಂತರ 1962 ಮಾರ್ಚ್ 15 ರಂದು ಅಮೇರಿಕಾ ಅದ್ಯಕ್ಷ ಕೆನಡಿಯವರು ಮೇಲೆ ನೀಡಿದ ನಾಲ್ಕು ಗ್ರಾಹಕ ಹಕ್ಕುಗಳ ಘೋಷಣೆಯನ್ನು ಮಾಡಿದರು, ಬಾರತವು ಸೇರಿ ಹಲವು ರಾಷ್ಟ್ರಗಳು ಈ ಹಕ್ಕುಗಳನ್ನು ಪಾಲಿಸುತ್ತಾ ಬಂದಿವೆ, ಆ ನೆನಪಿನಲ್ಲೇ ಪ್ರತಿ ಮಾರ್ಚ್ 15 ರಂದು 'ಗ್ರಾಹಕ ದಿನಾಚರಣೆಯನ್ನು' ಆಚರಿಸುತ್ತೇವೆ. ಭಾರತದ ಮಟ್ಟಿಗೆ ಹೇಳುವುದಾದರೆ ಗ್ರಾಹಕ ಸೇವೆಯಲ್ಲಿ ಮಾಹಿತಿ ಹಕ್ಕಿನ ಅನುಷ್ಠಾನ ಸರಿಯಾಗಿ ಆಗದೆ ಇರುವುದು ನಮ್ಮ ಕಣ್ಣೆದುರಿನ ಸತ್ಯ. ಭಾಷಾ ವೈವಿದ್ಯತೆಯುಳ್ಳ ಭಾರತದಲ್ಲಿ ನಾವು ಕೊಳ್ಳುವ ವಸ್ತುಗಳ ಮಾಹಿತಿ ಕೇವಲ ಇಂಗ್ಲಿಶ್ ಅಥವಾ ಹಿಂದಿಯಲ್ಲಿ ಮಾತ್ರ ಸಿಗುತ್ತಿರುವುದು ಇದಕ್ಕೆ ನೇರ ಉದಾಹರಣೆ. ಗ್ರಾಹಕರಿಗೆ ಬೇಕಾದ ಮಾಹಿತಿ ಅವರ ನುಡಿಯಲ್ಲೇ ಸಿಗದಿರುವುದು  ಒಂದು ಬೇಸರದ ಸಂಗತಿ ಆದರೆ ಆ ಮಾಹಿತಿಯನ್ನು ನಮ್ಮ ನುಡಿಯಲ್ಲೇ ನಮಗೆ ನೀಡಿ ಎಂದು ಗ್ರಾಹಕನಾಗಿ ಹೊಕ್ಕೊತ್ತಾಯ ಮಾಡದೆ ಇರುವುದು ಒಂದು ದುರಂತವೇ ಸರಿ.

ಕನ್ನಡಿಗರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಮತ್ತು ಮಾಹಿತಿ ಸಿಗದೇ ಹೋದಲ್ಲಿ ಸುರಕ್ಷತೆ ಮತ್ತು ಪಾರದರ್ಶಕತೆಗೆ ಸಂಭಂದಿಸಿದ ಅನಾಹುತಗಳು ಆಗುವುವು. ಸದ್ಯದ ಆರ್ಥಿಕ ಬೆಳವಣಿಗೆ ಹಾಗು ಖಾಸಗೀಕರಣದಿಂದ ಹಲವಾರು ರೀತಿಯ ಉದ್ಯಮಗಳು ನಮ್ಮ ನಾಡಿನಲ್ಲಿ ಹುಟ್ಟಿಕೊಳ್ಳುತ್ತಿವೆ. ಹಿಂದೆ ಬಿ.ಎಸ್.ಏನ್.ಎಲ್  ಒಂದೇ ಇತ್ತು, ಇಂದು ಏರ್ಟೆಲ್, ವಡಾಫೋನ್, ಇತ್ಯಾದಿ... ಕ.ರಾ.ರ.ಸಾ.ಸಂ. ಸರ್ಕಾರಿ ಬಸ್ಸಿನ ಜೊತೆ  ವಿ.ಅರ್.ಎಲ್, ಎಸ್.ಅರ್.ಎಸ್ ಎಂಬ ಖಾಸಗಿ ಬಸ್ ಸೇವೆಗಳು... ಹೀಗೆ ಎಲ್ಲ ವಿಭಾಗದಲ್ಲಿ ಖಾಸಗಿ ಉದ್ಯಮಗಳು ತಲೆ ಎತ್ತುತ್ತಿವೆ.  ಇವರ ನಡುವಿನ ಸ್ಪರ್ಧೆಯಿಂದ ಇಂದು ಗ್ರಾಹಕ ದೊರೆಯಾಗಿದ್ದಾನೆ, ಗ್ರಾಹಕ ಸೇವೆಯಲ್ಲಿನ ಗುಣಮಟ್ಟ ಹೆಚ್ಚುತ್ತಿದೆ. ಗ್ರಾಹಕನಾಗಿ ಕನ್ನಡದಲ್ಲಿ ಮಾಹಿತಿ ಹಾಗು ಸೇವೆಯ ಅವಶ್ಯಕತೆ ಕುರಿತು ಬಳಕೆದಾರರಿಗೆ ತಿಳುವಳಿಕೆ ಇಲ್ಲದಿರುವುದು ಮತ್ತು ಕನ್ನಡದಲ್ಲಿ ಗ್ರಾಹಕ ಸೇವೆಯ ಪ್ರಾಮುಕ್ಯತೆ ಅರಿವು ಉದ್ಯಮಿಗಳಿಗೆ ಇಲ್ಲದಿರುವುದು ಇಂದು ಗ್ರಾಹಕ ಸೇವೆಯಲ್ಲಿ ಕನ್ನಡದ ಕಡೆಗಣನೆಗೆ ಕಾರಣ. ಕರ್ನಾಟಕದಲ್ಲಿ ಒಂದು ಉದ್ಯಮ ನಡೆಸಬೇಕೆಂದರೆ 'ಕನ್ನಡ' ಅನಿವಾರ್ಯ ಎಂಬ ಪರಿಸ್ತಿತಿ ನಿರ್ಮಾಣವಾದರೆ ಮಾತ್ರ ಕನ್ನಡ ಹಾಗು ಕನ್ನಡಿಗರ ಅಸ್ತಿತ್ವ ನಾಡಿನಲ್ಲಿ ಉಳಿಯುತ್ತದೆ. ಕರ್ನಾಟಕದಲ್ಲಿ ಕನ್ನಡದ ಅನಿವಾರ್ಯತೆ ರೂಪಿಸಲು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯಿಂದ ಮಾತ್ರ ಸಾದ್ಯ. ಅಂದರೆ, ಗ್ರಾಹಕ ಸೇವೆಯಲ್ಲಿನ ಪ್ರತಿ ಹಂತದಲ್ಲು ಕನ್ನಡದಲ್ಲಿ ಸೇವೆ ನಿಡುವಂತೆ ಹಕ್ಕೊತ್ತಾಯ ಮಾಡಿದರೆ, ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಕನ್ನಡಿಗರ ಅವಶ್ಯಕತೆ ಬೀಳುತ್ತದೆ ಆ ಮೂಲಕ ಕನ್ನಡಿಗರಿಗೆ ಅವಕಾಶಗಳು ಸಿಗುತ್ತವೆ ಹಾಗೆಯೇ ಕನ್ನಡಕ್ಕೊಂದು ಮಾರುಕಟ್ಟೆ ಸಿಗುತ್ತದೆ. ಬೆಳಗ್ಗೆ ಹದಿನೈದು ರೂಪಾಯಿ ಕೊಟ್ಟು ತರುವ ಹಾಲಿನಿಂದ ಹಿಡಿದು ರಾತ್ರಿ ಆರಿಸಿ ಮಲಗುವ ವಿದ್ಯುತ್ ದೀಪದವರೆಗೂ ನೀವು ಗ್ರಾಹಕರು, ಹತ್ತಿರದ ತರಕಾರಿ ಅಂಗಡಿಗೆ ಹೋದಾಗ ಕನ್ನಡದಲ್ಲೇ ಎಲ್ಲ ಕೇಳುವ ನಾವು ಸೂಪರ್ ಮಾರ್ಕೆಟ್ ಕಾಲಿಟ್ಟೊಡನೆ ಮುಜುಗರದಿಂದ ಇಂಗ್ಲೀಷಿನಲ್ಲೋ ಅಥವಾ ಹಿಂದಿಯಲ್ಲೋ ಸೇವೆ ಪಡೆದುಕೊಂಡು ಬರುತ್ತೇವೆ, ಗ್ರಾಹಕ ಹಕ್ಕುಗಳ ನಿಟ್ಟಿನಲ್ಲಿ ಇದೊಂದು ಅಪಾಯಕಾರಿ ಬೆಳವಣಿಗೆ.

ಇಂದು, ಕನ್ನಡ ಎಂದರೆ ಸಿನಿಮ, ಸಾಹಿತ್ಯ ಹಾಗು ಸುದ್ದಿ ಹಾಳೆಗಳಿಗಷ್ಟೇ ಮೀಸಲು ಎಂಬ ಪರದೆಯನ್ನು ನಮಗೆ ನಾವೇ ಹಾಕಿಕೊಂಡಿದ್ದೇವೆ. ತಂತ್ರಜ್ಞಾನ, ಬ್ಯಾಂಕಿಂಗ್ ವ್ಯವಸ್ತೆ, ಟೆಲಿಫೋನ್ ಹೀಗೆ ಹಲವು ಆಧುನಿಕ ಸೇವೆಗಳಿಗೆ ಕನ್ನಡ ಸರಿ ಹೊಂದುವುದಿಲ್ಲ ಎಂಬ ಅಜ್ಞಾನ ಹಲವರಲ್ಲಿ ಮನೆ ಮಾಡಿದೆ. ಜಗತ್ತಿಗೆ ಅತ್ಯಾದುನಿಕ ತತ್ರಜ್ನಾನದ ಕೊಡುಗೆ ನೀಡುವ ಜಪಾನ್, ಜರ್ಮನಿ, ಕೊರಿಯದಂತಹ ದೇಶಗಳು ತಮ್ಮ ನುಡಿಯಲ್ಲೇ ಅಲ್ಲಿರುವ ಗ್ರಾಹಕರಿಗೆ ಸೇವೆ ನೀಡುತ್ತಿವೆ, ಆದರೆ ಅಲ್ಲಿ ತಯಾರಾದ ಟ.ವಿ, ಕಾರು, ಮೊಬೈಲ್ ಗಳು ಕರ್ನಾಟಕದಲ್ಲಿ ಮಾರಾಟವಾಗುವಾಗ ಇಂಗ್ಲಿಶ್ ಅಥವಾ ಹಿಂದಿಯಲ್ಲಿ ಗ್ರಾಹಕ ಸೇವೆ ಸಿಗುತ್ತದೆ! ಗ್ರಾಹಕನಾಗಿ ಕನ್ನಡದಲ್ಲಿ ಸೇವೆ ನೀಡುವಂತೆ ಒತ್ತಾಯ ಮಾಡದೆ, ಅರ್ಥವಾಗದಿದ್ದರೂ, ಅನಾನುಕೂಲ ಇದ್ದರು ಸಹಿಸಿಕೊಂಡು ಅವರ ಕನ್ನಡೇತರ ನುಡಿಯ ಗ್ರಾಹಕ ಸೇವೆಯನ್ನು ಸ್ವೀಕರಿಸುತ್ತಿರುವೆವು. ಸಂಪೂರ್ಣವಾಗಿ ಕನ್ನಡ ಆಯ್ಕೆಗಳನ್ನು ಹೊಂದಿರುವ ಅಲೆಯುಲಿ (ಮೊಬೈಲ್ ಫೋನ್ ) ಬೇಕು ಎಂದು ಹಲವು ಗ್ರಾಹಕರು ಕಂಪನಿಗಳಿಗೆ ಕೇಳಿದರೆ, ಸೂಪರ್ ಮಾರ್ಕೆಟ್ನಲ್ಲಿ ಕೊಳ್ಳುವ ಒಂದು ಮಣ ದಿನಸಿಗೆ ನೀಡುವ ಹನುಮಂತನ ಬಾಲದಂತಹ ರಸೀದಿಯನ್ನು ಕನ್ನಡದಲ್ಲೇ ಬೇಕೆಂದು ನೂರು ಗ್ರಾಹಕರು ಒತ್ತಾಯಿಸಿದರೆ, ಕನ್ನಡದಲ್ಲಿ ರಸೀದಿ ಅಚ್ಹೊತ್ತುವ ಯಂತ್ರಗಳ ಬೇಡಿಕೆ ಸೂಪರ್ ಮಾರ್ಕೆಟ್ ನವರಿಂದ ಕಂಪನಿಗಳಿಗೆ ಹೋಗುವುದು, ಹೀಗೆ ತಂತ್ರಜ್ನಾದಲ್ಲಿ ಕನ್ನಡದ ಬೇಡಿಕೆ ಹೆಚ್ಚಿದರೆ ಕಂಪನಿಗಳು ಸಂಪೂರ್ಣ ಕನ್ನಡ ಮೊಬೈಲ್ ಮತ್ತು  ರಸೀದಿ ಯಂತ್ರಗಳನ್ನು ಮಾರುಕಟ್ಟೆಗೆ ತರುವ ಹಾಗೆ ಆಗುತ್ತದೆ ಆ ಮೂಲಕ ಗ್ರಾಹಕ ಸೇವೆಯು ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗುತ್ತದೆ. ಇದು ಗ್ರಾಹಕ ಮತ್ತು ಮಾರಾಟಗಾರರ ನಡುವಿನ ವ್ಯಾಪಾರಕ್ಕೆ ಸಂಭಂಧಿಸಿದ ಹಲವು ತೊಡಕುಗಳನ್ನು ಕಡಿಮೆ ಮಾಡುತ್ತದೆ. ಗ್ರಾಹಕ ಸೇವೆಯಲ್ಲಿ ಸಿಗುವ ಮಾಹಿತಿ ಮತ್ತು ಕೊಳ್ಳುವ ವಸ್ತುಗಳ ಕುರಿತ ಮಾಹಿತಿ ನಮ್ಮ ನುಡಿಯಲ್ಲಿ ನಮಗೆ ಪೂರ್ಣವಾಗಿ ಅರ್ಥ ಆಗುವುದರಿಂದ  ಅನುಕೂಲಕರ ಗ್ರಾಹಕ ಸೇವೆ ಸಿಕ್ಕಂತಾಗುತ್ತದೆ.

ಗ್ರಾಹಕ ಚಳುವಳಿ ಎಂದರೆ ಮೊದಲೇ ತಿಳಿಸಿದ ಗ್ರಾಹಕ ಹಕ್ಕುಗಳ ಒತ್ತಾಯದ ಜೊತೆಗೆ ಗ್ರಾಹಕ ಸೇವೆಯಲ್ಲಿನ ಭಾಷಾ ಪ್ರಾಮುಕ್ಯತೆಯು ಸೇರಿದೆ. ಮಾಹಿತಿ ಹಕ್ಕಿಗಾಗಿ ಹೋರಾಟ ಮಾಡಿ, ಆ ಮಾಹಿತಿ ನಿಮಗೆ ತಿಳಿಯುವ ನುಡಿಯಲ್ಲಿ ಇಲ್ಲದಿದ್ದರೆ ಅದರಿಂದ ಏನು ಪ್ರಯೋಜನ? ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನಮ್ಮಲ್ಲಿನ ಗ್ರಾಹಕ ಚಳುವಳಿ ಕನ್ನಡ ಕೇಂದ್ರಿತ ಆದಲ್ಲಿ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಕನ್ನಡದಲ್ಲಿ ಗ್ರಾಹಕ ಸೇವೆಯ ಹಕ್ಕೊತ್ತಾಯದಿಂದ ಕನ್ನಡಿಗರಿಗೆ ಅನುಕೂಲ ಒಂದೇ ಅಲ್ಲ ನಾಡು -ನುಡಿಯ ಉಳಿವು ಆಡಗಿದೆ. 


ಸೋಮವಾರ, ಜುಲೈ 30, 2012

ಬದಲಾವಣೆ ತರುವತ್ತ ನೀವು ಕೈ ಜೋಡಿಸಿ


"ಬೇಡನೊಬ್ಬ ಹಕ್ಕಿಗಳ ಗುಂಪಿಗೆ ಬಲೆ ಬೀಸಿದ್ದು, ಆ ಬಲೆಯೊಳಗೆ ಹಕ್ಕಿಗಳೆಲ್ಲ ಸಿಕ್ಕಿಕೊಂಡಿದ್ದು, ನಂತರ ಎಲ್ಲ ಹಕ್ಕಿಗಳು ಒಟ್ಟುಕೂಡಿ ಬಲೆಯ ಜೊತೆಗೆ ಆಕಾಶಕ್ಕೆ ಹಾರಿದ್ದು, ಬಲೆ ಬೀಸಿದ ಬೇಡ ಬೆಪ್ಪಾಗಿದ್ದು, ಗೆಳೆಯ ಇಲಿರಾಯ, ಬಲೆ ಕಚ್ಚಿ ಹಕ್ಕಿಗಳಿಗೆ ಬಿಡುಗಡೆ ನೀಡಿದ್ದು..." ಒಗ್ಗಟ್ಟಿನ ಮಹತ್ವವನ್ನು ಸಾರುವ ಈ ಕತೆಯನ್ನು ಒಂದರಲ್ಲೋ ಇಲ್ಲಾ ಎರಡನೇ ತರಗತಿಯಲ್ಲಿ ಕೇಳಿದ ನೆನಪು. ಈ ಹಳೆಯ ನೆನಪು ಮರುಕಳಿಸಲು ಕಾರಣ ಈ ಹೊಸ ಪ್ರಕರಣ.
ಬಿ.ಎಂ.ಟಿ ಎಫ್ (ಬೆಂಗಳೂರು ಮಹಾನಗರ ಕಾರ್ಯಪಡೆ) ಪಾಲಿಕೆಯ ಆಸ್ತಿ ಉಳಿಸುವಿಕೆ ಹಾಗು ಕುಂದು ಕೊರತೆಗಳನ್ನು ಸರಿಪಡಿಸುವ ಸಲುವಾಗಿ ಹುಟ್ಟಿಕೊಂಡ ಪಡೆ. ಇತ್ತೀಚಿಗೆ ಅಂದರೆ ಜುಲೈ 19, 2012 ರಿಂದ ಮಿಂಬಲೆ ಮೂಲಕವೂ (http://bmtf.gov.in/index.htm) ದೂರುಗಳನ್ನು ಸಲ್ಲಿಸುವ ಅವಕಾಶ ಮಾಡಿಕೊಡಲಾಗಿತ್ತು. ಕರ್ನಾಟಕದಲ್ಲಿ ಕನ್ನಡಿಗರ ಕುಂದು ಕೊರತೆಗಳನ್ನು ನೀಗಿಸುವ ಸಲುವಾಗಿ ಹುಟ್ಟಿದ್ದ ಈ ಪಡೆಯ ಮಿಂಬಲೆ, ಕನ್ನಡವಿಲ್ಲದೆ ಕನ್ನಡಿಗರಿಂದ ದೂರವಿತ್ತು. ಕನ್ನಡಿಗರ ಅನುಕೂಲಕ್ಕಾಗಿ ಕನ್ನಡದಲ್ಲಿ ಮಿಂಬಲೆ ಯನ್ನು ನೀಡುವ ಗೋಜಿಗೆ ಈ ಕಾರ್ಯಪಡೆ ಹೋಗಿರಲಿಲ್ಲ.

ಇದನ್ನು ಗಮನಿಸಿದ ನಮ್ಮ ಜಾಗೃತ ಗ್ರಾಹಕ ಗೆಳೆಯರೊಬ್ಬರು ಕನ್ನಡ ಮಿಂಬಲೆ ನೀಡಬೇಕೆಂದು ಕಾರ್ಯಪಡೆಗೆ ಮಿಂಚಂಚೆ ಬರೆದು ಅದನ್ನು ಉಳಿದ ಗೆಳೆಯರೊಡನೆ ಹಂಚಿಕೊಂಡರು, ಇವರೊಬ್ಬರೇ ಪತ್ರ ಬರೆದಿದ್ದರೆ ನಮ್ಮ ಕಾರ್ಯಪಡೆ  ಕಾರ್ಯಪ್ರವ್ರುತ್ತರಾಗುತ್ತಿರಲಿಲ್ಲ ಅನಿಸುತ್ತದೆ. ಒಂದರ ಮೇಲೆ ಒಂದರಂತೆ ಉಳಿದ ಗೆಳೆಯರು ಪತ್ರ ಬರೆದರು , ಕನ್ನಡ ಮಿಂಬಲೆ ಸಿಗದಿದ್ದರೆ ಆಗುವ ಅನಾನುಕೂಲದ ಬಗ್ಗೆ ತಿಳಿಸಿ ಕೊಟ್ಟರು.
ಈ ಮಿನ್ಚೆಗಳಿಗೆ ಉತ್ತರ ಜುಲೈ 29 ರ ವಿಜಯವಾಣಿಯಲ್ಲಿ ಪ್ರಕಟವಾದ ಸುದ್ದಿಯಿಂದ ದೊರೆತಿದೆ. "ಕೇವಲ ಇಂಗ್ಲಿಷಿನಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತೊಂದರೆ ಆಗುತ್ತಿದೆ, ಕನ್ನಡದಲ್ಲೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಬೇಕೆಂಬ ಮನವಿ ಬಂದಿದೆ, ಇನ್ನು 3-4 ದಿನದಲ್ಲಿ ಕನ್ನಡದ ಅನುಷ್ಠಾನ ಆಗುವುದು" ಎಂದು ಅರ. ಪಿ ಶರ್ಮ ಅವರು ತಿಳಿಸಿದ್ದಾರೆ.
ಇದಲ್ಲವೇ ಒಗ್ಗಟ್ಟಿನಿಂದ ಬರೆದ ಪತ್ರಗಳಿಗೆ ಸಿಕ್ಕ ಗೆಲವು.



 ಕನ್ನಡ ಅನ್ನೋದು ಮರೆಯಾಗುತ್ತಿದೆ , ಈಗ ಏನು ಮಾಡಿದರು ಅದನ್ನು ಹಿಂತಿರುಗಿ ಹಳೆಯ ವೈಬವಕ್ಕೆ ಮರಳಿಸಲು ಸಾದ್ಯವಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಕನ್ನಡದ ಸೇವೆ ಸಿಗದಿದ್ದ ಕಡೆ ಕನ್ನಡ ಸೇವೆ ನೀಡ ಬೇಕೆಂದು ಒತ್ತಾಯಿಸಿ ಪಡೆದು ಕೊಂಡರೆ ಬದಲಾವಣೆ ಸಾದ್ಯ. ಹೀಗೆಯೇ ಹಲವಾರು ಬದಲಾವಣೆಗಳಿಗೆ ನಮ್ಮ ಜಾಗೃತ ಗ್ರಾಹಕರು ಕಾರಣರಾಗಿದ್ದಾರೆ, ಇವರಿಗೆಲ್ಲ ನನ್ನ ನನ್ನಿ.

ಬದಲಾವಣೆ ತರುವತ್ತ  ನೀವು ಕೈ ಜೋಡಿಸಿ.

ನಾನು ಕೂಡ ಈ ಕುರಿತು ಪತ್ರ ಬರೆದಿದ್ದೆ ಅದರ ಪ್ರತಿ ಕೆಳಗಿದೆ ನೋಡಿ:

---------- Forwarded message ----------
From: Ratheesha B R <rathishstar@gmail.com>
Date: 2012/7/21
Subject: ಬಿ.ಎಂ.ಟಿ.ಎಫ್. ನಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಆಗಲಿ
To: bmtf.policestation@gmail.com, cm@kar.nic.in
Cc: Kannada Pradhikara <kannadapradhikara@gmail.com>


ನಮಸ್ಕಾರ ಬಿ.ಎಂ.ಟಿ.ಎಫ್.

ಇತ್ತೀಚೆಗಷ್ಟೇ ನಿಮ್ಮ ಬಗ್ಗೆ ಪತ್ರಿಕೆಗಳಿಂದ ಓದಿ ತಿಳಿದೆ. ಹೆಚ್ಹಿನ ಮಾಹಿತಿ ಅರಿಯಲು ನಿಮ್ಮ ಮಿಂದಾಣಕ್ಕೆ (http://bmtf.gov.in/index.htm) ಬೇಟಿ ಕೊಟ್ಟರೆ ನನಗೆ ಆಶ್ಚರ್ಯ ಕಾದಿತ್ತು. ಮೊದಲನೆಯದಾಗಿ, ನಿಮ್ಮ ಮಿಂದಾಣ ಕರ್ನಾಟಕ ರಾಜ್ಯದ ಆಡಳಿತ ನುಡಿಯಾದ ಕನ್ನಡದಲ್ಲಿ ಇಲ್ಲದಿರುವುದು, ಬೆಂಗಳೂರಿನ ಆಸ್ತಿಗಳ ರಕ್ಷಣೆಗೆಂದು ಹುಟ್ಟಿ ಕೊಂಡಿರುವ ಈ ರಾಜ್ಯ ಸರ್ಕಾರದ ಅಂಗ ಈ ರೀತಿ ಕನ್ನಡ ಕಡೆಗಣನೆ ಮಾಡಿರುವುದು ವಿಷಾದದ ಸಂಗತಿ. ನಮ್ಮವರನ್ನು ನಮ್ಮ ನುಡಿಯ ಮೂಲಕ ತಲುಪದ ನೀವು ಇನ್ನೇನು ಸೇವೆ ನೀಡ ಬಲ್ಲಿರಿ? ರಾಜ್ಯದ ಜನತೆಯ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಸರಿ ಕಾಣುವುದಿಲ್ಲ. ದಯವಿಟ್ಟು ನಿಮ್ಮ ಸೇವೆಯನ್ನು ಕನ್ನಡದಲ್ಲಿ ನೀಡಿ, ಮಿಂದಾಣದ ಮಾಹಿತಿಯನ್ನು ಕನ್ನಡದಲ್ಲಿ ಕೊಡಿ.
ಎರಡನೆಯದಾಗಿ, ರಾಜ್ಯ ಸರ್ಕಾರದ ಕಾನೂನಿನ ಪ್ರಕಾರ ಬೆಂಗಳೂರನ್ನು "Bengaluru " ಎಂದು ಬರೆಯ ಬೇಕು ಆದರೆ ನಿಮ್ಮ ಮಿಂದಾಣದಲ್ಲಿ ಅದು "bangalore " ಆಗಿದೆ. ದಯವಿಟ್ಟು ಈ ತಪ್ಪನ್ನು ಸರಿಪಡಿಸಿ.


ಇಂತಿ ನಿಮ್ಮ,
ರತೀಶ 



ಬುಧವಾರ, ಜೂನ್ 6, 2012

ಕ.ರಾ.ರ.ಸಾ.ನಿಗಮ ಮತ್ತು ಕನ್ನಡ

ಅದೇಕೋ ಗೊತ್ತಿಲ್ಲ? ನಮ್ಮ ರಾಜ್ಯದ ಕ.ರಾ.ರ.ಸಾ. ನಿಗಮ ಮತ್ತು ಕನ್ನಡಕ್ಕೆ ಸರಿಯಾದ ಜಾತಕವೇ ಕೂಡಿ ಬರುವುದಿಲ್ಲ ಅನಿಸುತ್ತದೆ. ಅವರ ಮಿಮ್ಬಲೆಯ ಕನ್ನಡ ಅವತರಣಿಕೆಯಲ್ಲಿ 'ಪ್ರತಿದಿನದ ಸರಾಸರಿ ಸಾರಿಗೆ ಆದಾಯ' ಎಂಬುದರ ಬದಲಾಗಿ ಬದಲಾಗಿ 'ರತಿದಿನದ ಸರಾಸರಿ ಸಾರಿಗೆ ಆದಾಯ' ಎಂದಿರುವುದನ್ನು ಹುಡುಕಿ ತೋರಿದ ಮೇಲೆ ರಾತ್ರೋ ರಾತ್ರಿ ಅದನ್ನು ಮಾತ್ರ ಸರಿಪಡಿಸಿ ಕೈ ಕಟ್ಟಿ ಕುಳಿತರು. ಇಂತಹ ಬರವಣಿಗೆಯ ತಪ್ಪುಗಳ ಜೊತೆಗೆ ನಿಗಮದವರು ಕನ್ನಡ ಹಾಗು ಕನ್ನಡಿಗನಿಗೆ ಎಸಗುತ್ತಿರುವ ದ್ರೋಹ ಒಂದೆರಡಲ್ಲ. ನಿಗಮದ ಸಾರಿಗೆ ಬಸ್ಸಿನ ಬಳಕೆದಾರರು ಕನ್ನಡಿಗರೇ ಆಗಿದ್ದಾರೆ, ಆದರೆ ಕನ್ನಡಿಗನಿಗೆ ಕನ್ನಡದಲ್ಲಿ ಸೇವೆ ನೀಡುವಲ್ಲಿ ನಿಗಮ ತೋರುತ್ತಿರುವ ಮಲತಾಯಿ ಧೋರಣೆ ಮಾತ್ರ ಸಹಿಸಲಾಗದು.

ಹಾಗಾದರೆ ಅಂತಹ ದ್ರೋಹಗಳೇನು?
೧. ಕನ್ನಡ ಮಿಂಬಲೆ ಪ್ರಾಥಮಿಕವಾಗಿ ಕನ್ನಡದಲ್ಲಿ ಇಲ್ಲ. ಇದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ರಾಜ್ಯದ ಆಡಳಿತ ನುಡಿಗೆ ಕೊಟ್ಟ ಮಾನ್ಯತೆ !!!???
೨. ಕನ್ನಡ ಮಿಮ್ಬಲೆಗೆ ಹೋಗಿ ಯಾವುದಾದರು ಮಾರ್ಗಕ್ಕೆ ಬಸ್ಸಿನ ಲಭ್ಯತೆ ಹುಡುಕಿ ಕಾಯ್ದಿರಿಸಲು ಸಾಧ್ಯವಿಲ್ಲ. "ಹುಡುಕಿ ಮತ್ತು ಟಿಕೆಟ್ ಕಾಯ್ದಿರಿಸಿ' ಭಾಗವು ಕೆಲಸ ಮಾಡುವುದಿಲ್ಲ. ಕನ್ನಡಿಗರು ಬಸ್ಸನ್ನು ಹುಡುಕಲು ಇಂಗ್ಲಿಷ್ ಕಲಿಯಬೇಕೆ?
೩.'ಅವತಾರ್ ಸೆಲ್' ನಲ್ಲಿ ಕನ್ನಡ ಆಯ್ಕೆ ಇಲ್ಲ, ಒಮ್ಮೆ ಲಾಗಿನ್ ಆದರೆ ಅಲ್ಲಿ ಇರುವುದು ಪೂರ್ತಿ ಇಂಗ್ಲಿಷ್. ಕೇವಲ ಇಂಗ್ಲಿಷ್ ಬಲ್ಲವರು ಮಾತ್ರ ಇದನ್ನು ಬಳಸಬೇಕೆ?
೪.ಮಿಂಬಲೆಯಲ್ಲಿ ಪಡೆಯುವ ಮುಂಗಡ ಚೀಟಿ (ಇ- ಟಿಕೆಟ್ ) ಕನ್ನಡದಲ್ಲಿ  ಇಲ್ಲ. ಕನ್ನಡ ಮಾತ್ರ ಬಲ್ಲ ಹಲವು ಪ್ರಯಾಣಿಕರು ಇದರಿಂದ ದಿನ ನಿತ್ಯ ಕಷ್ಟ ಪಡುತ್ತಿದ್ದಾರೆ.  (ಇದರ ಅನಾನುಕೂಲದ ಬಗ್ಗೆ ತಿಳಿಯಲು ಈ ಕೊಂಡಿ ಬಳಸಿ)
೫.'ನಿಮ್ಮ ಅನಿಸಿಕೆ' ವಿಭಾಗದಲ್ಲಿ ನೀವು ಅನಿಸಿಕೆಗಳನ್ನು ಬರೆದು ಉಳಿಸಲು (ಸೇವ್) ಆಗುತ್ತಿಲ್ಲ.ಅಲ್ಲಿ ಅನಿಸಿಕೆ ಬರೆಯುವ 'ಜಾಗವೇ' ಇಲ್ಲ. ಕನ್ನಡಿಗರ ಅನಿಸಿಕೆ ನೀಡಲು ಅನರ್ಹರೆ? ಇಲ್ಲವೇ 'ಕನ್ನಡಿಗರ ಅನಿಸಿಕೆ ಕಟ್ಕೊಂಡು ನಮಗೆ ಆಗಬೇಕಾದ್ದು ಏನು ಇಲ್ಲ' ಎಂಬ ಧೋರಣೆಯೇ?
೬. ಐರಾವತ ಬಸ್ಸುಗಳಲ್ಲಿ ಕನ್ನಡದಲ್ಲಿ ಮನರಂಜನೆ ಬೇಡಿದರು ಸಿಗದು.
...... ಹೀಗೆ ಬರೆಯುತ್ತ ಹೋದರೆ ಪುಟಗಳೇ ಸಾಲದು. ಮೇಲಿನವು ಕೆಲವು ಎತ್ತುಗೆಗಳು ಮಾತ್ರ.

ಕಾರಣಗಳು ಏನಿರ ಬಹುದು?
ನಿಗಮದ ಈ ಕನ್ನಡದ ಕಡೆಗಣನೆಗೆ ಕಾರಣಗಳನ್ನು ಹುಡುಕಿದರೆ...
೧. ಮೊದಲು ಕಣ್ಣಿಗೆ ಕಾಣುವುದು ನಮ್ಮ ನಿಗಮದ ಮೇಲಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಕನ್ನಡದ ಮೇಲೆ ಇರುವ ತಿರಸ್ಕಾರ. ಕನ್ನಡ ಅನುಷ್ಟಾನಕ್ಕೆ ಇರುವ ಇಚ್ಚಾ ಶಕ್ತಿಯ ಕೊರತೆ. ( ಕನ್ನಡ ಅನುಷ್ಠಾನದ  ಕುರಿತು ಹಲವು ಒಲೆಗಳನ್ನು ಬರೆದರೂ ಅವರು ಉತ್ತರಿಸುವುದಿಲ್ಲ.)
೨. ಬೆಂಗಳೂರು ಹಾಗು ಉಳಿದ ಕೆಲವು ನಗರಗಳಲ್ಲಿ ಓಡಾಡುವ ಬೆರಳೆಣಿಕೆಯ ಪರಭಾಷಾ ಪ್ರಯಾಣಿಕರಿಂದಲೇ ನಮಗೆ ಹೆಚ್ಚಿನ ಆದಾಯ ಬರುತ್ತಿರುವುದು, ಅವರಿಗೆ ಉಪಯೋಗ ಆಗುವ ಹಾಗೆ ವ್ಯವಸ್ಥೆಯನ್ನು ಕಟ್ಟ ಬೇಕು, ಅವರ ಅನುಕೂಲತೆಗೆ ಮೊದಲ ಆದ್ಯತೆ ನೀಡ ಬೇಕು ಎಂಬ ನಿಗಮದವರ ಮನಸ್ಥಿತಿ.
೩. ಕನ್ನಡಿಗರು ಮಿಂಬಲೆ ಬಳಸುವುದೇ ಇಲ್ಲ ಬಿಡಿ,ಇಂಗ್ಲಿಷ್ ಅವತರಣಿಕೆ ಒಂದು ಸರಿ ಇದ್ರೆ ಸಾಕು ಎಂಬ ತಿರಸ್ಕಾರ
೪. ಕನ್ನಡದಲ್ಲಿ ಸೇವೆ ನೀಡದಿದ್ದರೆ ಕನ್ನಡಿಗರೇನು ಮಾತನಾಡುವುದಿಲ್ಲ ಎಲ್ಲದಕ್ಕೂ ಬಾಯಿ ಮುಚ್ಚಿಕೊಂಡು ಇರುತ್ತಾರೆ. ಹಾಗೇನಾದರು ಬಾಯಿ ತೆರೆದರೆ ಅದು ಕೇವಲ ಕೆಲವರು ಮಾತ್ರ, ಹಾಗಾಗಿ ಅವರ ಮಾತಿಗೆ ತಲೆ ಕೆಡಿಸಿ ಕೊಳ್ಳದ್ದಿದ್ದರಾಯಿತು ಎಂಬ ಆಲೋಚನೆ. (ಇವರ ಈ ಆಲೋಚನೆಗೆ ಒಂದು ವಿಧದಲ್ಲಿ ಪ್ರಯಾಣಿಕರೆ ಹೊಣೆ. ಎತ್ತುಗೆಗೆ, ಬಸ್ಸಿನಲ್ಲಿ ಹಿಂದಿ ಹಾಡು ತೇಲಿ ಬರುತ್ತಿದ್ದಾಗ ಎಷ್ಟು ಮಂದಿ ವಿರೋಧಿಸಿದ್ದಾರೆ?)
.... ಇನ್ನು ಬೇರೆ ಕಾರಣಗಳಿರಬಹುದು. ಆದರೆ ನಮ್ಮ ಕಣ್ಣಿಗೆ ನೇರವಾಗಿ ಕಾಣುವುದು ಇವುಗಳು.

ನಾವೇನು ಮಾಡ ಬಹುದು?
ನಿಗಮದ ತಪ್ಪು ಕಲ್ಪನೆಗಳನ್ನು ತಪ್ಪು ಎಂದು ತೋರಿಸ ಬೇಕು, ಅದು ಸಾಧ್ಯವಿರುವುದು ಕೇವಲ ಸಾರಿಗೆಯ ಬಳಕೆದಾರರಿಗೆ. ಬಸ್ಸಿನಲ್ಲಿ ಕನ್ನಡೇತರ ಹಾಡು ಕೇಳಿ ಬಂದಲ್ಲಿ ಕನ್ನಡ ಹಾಡನ್ನು ಹಾಕುವಂತೆ ಒತ್ತಾಯಿಸ ಬೇಕಾಗಿದೆ. ಸಾರಿಗೆ ವ್ಯವಸ್ತೆಯ ಬಳಕೆ ಮಾಡುವಾಗ, ಚೀಟಿ ಕೊಳ್ಳುವುದರಿಂದ ಹಿಡಿದು (ನೇರವಾಗಿ ಅಥವ ಮುಂಗಡವಾಗಿ ) ಪ್ರಯಾಣದ ಕೊನೆಯವರೆಗೂ ಕನ್ನಡದಲ್ಲಿ ಸೇವೆ ಪಡೆದುಕೊಳ್ಳಬಹದು, ದೊರಕದಿದ್ದಲ್ಲಿ ಕನ್ನಡ ಸೇವೆಗೆ ಒತ್ತಾಯ ಮಾಡಬಹುದು. ಸಾರಿಗೆಯ ಕೊಡುಗೆಗಳ, ಜಾಹಿರಾತುಗಳ ಹಾಗು ಇತರೆ ಮಾಹಿತಿಗಳು ಕನ್ನಡದಲ್ಲಿ ಮೊದಲು ದೊರೆಯುದೇ ತಿಳಿದು,ಇಲ್ಲವಾದಲ್ಲಿ ಒತ್ತಾಯ ಮಾಡಿ ಪಡೆದುಕೊಳ್ಳಬಹುದು. ಹನಿ ಹನಿ ಕೂಡಿದರೆ ಹಳ್ಳ ಎಂಬುವಂತೆ ಪ್ರತಿಯೊಬ್ಬರೂ ಇದನ್ನು ವಿರೋಧಿಸಿದರೆ ನಿಗಮವು ತಾನಾಗಿಯೇ ದಾರಿಗೆ ಬರುತ್ತದೆ.
ಈಗಲೇ ಕಾರ್ಯಪ್ರವೃತ್ತರಾಗ ಬೇಕೆನಿಸಿದರೆ ಕೆಳಗೆ ನೀಡಿರುವ ಕ. ರಾ.ರ.ಸಾ.ನಿಗಮದ ಮಿಂಚಂಚೆ ವಿಳಾಸಗಳಿಗೆ ಮಿಂಚೆ ಬರೆದು ಸಂಪೂರ್ಣ ಕನ್ನಡ ಅನುಷ್ಠಾನಕ್ಕೆ ಒತ್ತಾಯಿಸಿ.